ಹಿಪೊಲೈಟ್ ಜೇನ್
	1882-1944. ಫ್ರೆಂಚ್ ನಾಟಕಕಾರ ಹಾಗೂ ಕಾದಂಬರಿಕಾರ. ಯುರೋಪ್ ಸಂಸ್ಕøತಿಯ ಹಾಗೂ ಹಲವು ಭಿನ್ನ ಧರ್ಮಗಳ, ತತ್ತ್ವ ಸಿದ್ಧಾಂತಗಳ ಸಾರಗ್ರಾಹಿ. ಫ್ರಾನ್ಸಿನ ವಿದೇಶಾಂಗ ಸಚಿವಾಲಯದಲ್ಲಿ ರಾಯಭಾರಿಯಾಗಿದ್ದ. 1882ರಲ್ಲಿ ಲಿಮೊಸಿನ್ ಪ್ರಾಂತದ ಬೆಲಾಕ್ ಎಂಬ ಊರಿನಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ. ತಂದೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ನಾಗಿದ್ದ. ನಾರ್ಮಲ್ ಸುಪೀರಿಯರ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ. ವಿದ್ಯಾರ್ಥಿ ದೆಸೆಯಿಂದಲೇ ಆಟಪಾಠಗಳಲ್ಲಿ ಅತ್ಯುತ್ತಮ ಶ್ರೇಣಿಯನ್ನೂ ಸ್ಥಾನವನ್ನೂ ಪಡೆದು ಪ್ರಶಸ್ತಿ ಬಹುಮಾನಗಳನ್ನೂ ಗಳಿಸಿದ್ದ. ಗ್ರೀಕ್, ಲ್ಯಾಟಿನ್ ಮತ್ತು ಜರ್ಮನ್ ಭಾಷೆಗಳಲ್ಲಿ ಸಮಾನ ಪ್ರೌಢಿಮೆ ಹೊಂದಿದ್ದ, ಬಡತನವಿದ್ದರೂ ಯುರೋಪ್‍ನ್ನೆಲ್ಲ ಸುತ್ತಿ ಅಮೆರಿಕ, ಕೆನಡ, ಮೆಕ್ಸಿಕೊ ದೇಶಗಳಲ್ಲಿ ಪ್ರವಾಸ ಕೈಗೊಂಡು ಅನುಭವ ಗಳಿಸಿದ.

	ಇವನಿಗೆ ಲ್ಯಾಟಿನ್‍ನಲ್ಲಿ ಬರೆಯುವ ಹವ್ಯಾಸವಿತ್ತೇ ವಿನಾ ಸಾಹಿತಿಯಾಗುವ ಕನಸು ಕಂಡಿರಲಿಲ್ಲ. ಫ್ರೆಂಚ್ ಭಾಷೆಯಲ್ಲಿ ಲೆ ಡೆರ್ನಿಯರ್ ರೀವ್ ದ ಎಡ್ಮಂಡ್ ಎಬೌಟ್ ಎಂಬ ಕಥೆಯನ್ನು ಮಾರ್ಸೆಲ್ ಎಟೂರಿಯಂಟ್ ಪತ್ರಿಕೆಯಲ್ಲಿ ಪ್ರಕಟಿಸಿದ (1904). ಇದು ಇವನ ಮೊದಲ ಕಥೆ. ಮುಂದೆ ಲೆ ಮ್ಯಾಡಿನ್ ಪತ್ರಿಕೆಯ ಕಥಾ ವಿಭಾಗದ ಸಂಪಾದಕನಾದ. ಪ್ರೊವಿನ್ಷಿಯಲೆಸ್ (1909) ಕೃತಿ ಇವನ ಮೊಟ್ಟ ಮೊದಲ ಕಥಾ ಸಂಕಲನ. ಲಾ ಫಾರ್ಮಾಸಿಯನ್ (1907) ಎಂಬ ಇವನ ಕಥೆ ಬಹಳ ಪ್ರಸಿದ್ಧವಾದದ್ದು. ಸೈಮನ್ ಲೆ ಪ್ಯಾಥಟಿಕ್ ಎಂಬ ಕಾದಂಬರಿ ಪತ್ರಿಕೆಯೊಂದರಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು, ತರುವಾಯ ಪುಸ್ತಕ ರೂಪ ಕಂಡಿತು (1918).

	ಸ್ವತಃ ಯುದ್ಧದಲ್ಲಿ ಭಾಗವಹಿಸಿ ವೀರಯೋಧರಿಗೆ ನೀಡುವ ಕ್ರಾಸ್ ಪದಕವನ್ನು ಗಳಿಸಿದ್ದ. ಇವನ ಯುದ್ಧಾನುಭವಗಳ ಶ್ರೇಷ್ಠವಾದ ಪ್ರತ್ಯಕ್ಷ ವರದಿ ಇವನ ಕ್ಯಾಂಪೇನ್ಸ್ ಅಂಡ್ ಇಂಟರ್‍ವಲ್ಸ್ ಕೃತಿಯಲ್ಲಿದೆ. ಸಿಗ್ ಫ್ರೈಡ್ ಎಟ್ ಲೇ ಲಿಮೋಸಿನ್(1922) ಕಾದಂಬರಿ ಇವನಿಗೆ ಅಂತಾರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿತು. ಇದು ಫ್ರೆಂಚ್ ಹಾಗೂ ಜರ್ಮನ್ ವೈರವನ್ನು ಚಿತ್ರಿಸುವ ಯುದ್ಧದ ಹೃದಯಸ್ಪರ್ಶಿ ಕಥೆಯಾಗಿದೆ. ನಾಟಕಗಳ ನಿರ್ಮಾಪಕ ಹಾಗೂ ಚಿತ್ರನಟನಾಗಿದ್ದ ಲೂಯಿ ಜ್ಯುವೆಚ್‍ನ ಪರಿಚಯವಾದಾಗಿನಿಂದ ಇವನು ನಾಟಕಗಳನ್ನು ಬರೆಯುವಂತಾಯಿತು. ಇವನ ಒತ್ತಾಯಕ್ಕೆ ಮಣಿದು ಸಿಗ್ ಫ್ರೈಡ್ ಎಟ್ ಲೇ ಲಿಮೋಸಿನ್ ಕಾದಂಬರಿಗೆ ನಾಟಕ ರೂಪ ನೀಡಿದ. ಈ ಮೂಲಕ ಪ್ಯಾರಿಸ್ಸಿನ ರಂಗಮಂದಿರಕ್ಕೆ ಒಬ್ಬ ಪ್ರತಿಭಾನ್ವಿತ ನಾಟಕಕಾರನ ಪ್ರವೇಶವಾದಂತಾಯಿತು. ತನ್ನ 46ನೆಯ ವಯಸ್ಸಿನಿಂದ ನಾಟಕ ರಚನೆಗಳಲ್ಲಿ ತೊಡಗಿಸಿಕೊಂಡ. ಆಂಫಿಟ್ರಿಯೋನ್-38 ಲಾ ಫಾಲಿ ಡಿ ಷೈಲಾಟ್, ಮಾರಿಸ್ ವ್ಯಾಲೆನ್ಸಿಯಾ, ಲಾ ಗ್ಯುರೆ ಡಿ ಟ್ರಾಯಿ ನಾ ವ್ರಾಪಾಸ್‍ಲ್ಯೂ ಮೊದಲಾದವು ಇವನ ಕೆಲವು ನಾಟಕ ಕೃತಿಗಳು. ಇವನ ಎಲ್ಲ ನಾಟಕಗಳೂ ಯಶಸ್ವಿಯಾಗಿವೆ.

	ದೇವ-ಮಾನವ, ಸ್ತ್ರೀ-ಪುರುಷ, ಒಳಿತು-ಕೆಡಕು, ಆಸ್ತಿಕ-ನಾಸ್ತಿಕ ಇಂತಹ ವ್ಶೆರುಧ್ಯಗಳ ನಡುವಿನ ಘರ್ಷಣೆಗಳೇ ಇವನ ನಾಟಕಗಳ ವಸ್ತು. ಭಾಷೆಯ ಸಮರ್ಥ ಬಳಕೆ, ಕಾವ್ಯಮಯ ಶೈಲಿ, ವಿಶಿಷ್ಟ ಕಲ್ಪಕತೆ, ಸ್ವಂತಿಕೆ, ಚತುರ ಸಂಭಾಷಣೆ ಇವುಗಳಿಂದ ಇವನ ಕೃತಿಗಳು ಫ್ರೆಂಚ್ ಸಾಹಿತ್ಯದ ಅಪೂರ್ವ ಕೃತಿಗಳೆನಿಸಿವೆ. ಇವನ ನಾಟಕಗಳನ್ನು ಇಂಪ್ರೆಷನಿಸ್ಟಿಕ್ಟ್ ನಾಟಕಗಳ ಪಂಕ್ತಿಗೆ ಸೇರಿಸಲಾಗಿದೆ. ವಾಲ್ಟೇರ್, ರೆನಾನ್, ಬರ್ನಾಡ್ ಷಾ ಮೊದಲಾದ ಪ್ರಸಿದ್ಧ ನಾಟಕಕಾರರಿಗೆ ಇವನನ್ನು ಹೋಲಿಸುತ್ತಾರೆ. ಫ್ರೆಂಚ್ ರಂಗಭೂಮಿಯ ಗಾರುಡಿ ಎಂದೇ ಪ್ರಸಿದ್ಧನಾಗಿದ್ದ ಈತ 1944 ರಲ್ಲಿ ಪ್ಯಾರಿಸ್‍ನಲ್ಲಿ ನಿಧನನಾದ.   			
	(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ